ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್; ಭಾರತ್ ಜೋಡೋ ಯುವ ಸಂಘಕ್ಕೆ 10 ಲಕ್ಷ ರೂ: ನೂತನ ಸಿ ಎಂ ಡಿಕೆಶಿ ಹಲವು ಘೋಷಣೆ

Bangaluru : ಡಿಕೆ ಶಿವಕುಮಾರ್ ಅವರು ಬುಧವಾರ ರಾಜ್ಯದ 18ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ರಾಜ್ಯದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ್ದು, ಎಲ್ಲಾ ಶಾಲಾ, ಕಾಲೇಜ್ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಬುಧವಾರ ಸಂಜೆ ವಿಧಾನಸೌಧದಲ್ಲಿ ನಡೆದ ತಮ್ಮ ನೇತೃತ್ವದ ಮೊದಲ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, “ರಾಜ್ಯದಲ್ಲಿ ಹೊಸ ಯುಗ ಆರಂಭಿಸಲು, ನಾವು ಮೊದಲ ಸಚಿವ ಸಂಪುಟ ಸಭೆಯಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ” ಎಂದರು.
ಉಚಿತ ಬಸ್ ಪಾಸ್ :
“ರಾಜ್ಯದಲ್ಲಿ ವಿದ್ಯಾರ್ಥಿನಿಯರಂತೆ ಎಲ್ಲಾ ಶಾಲಾ, ಕಾಲೇಜ್ ವಿದ್ಯಾರ್ಥಿಗಳಿಗೂ ಕೂಡ ಉಚಿತ ಬಸ್ ಪಾಸ್ ನೀಡಲಾಗುವುದು. ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಇದಕ್ಕಾಗಿ ಸಂಬಂಧಪಟ್ಟ ಅರ್ಜಿ ವಿತರಣೆಯ ಬಗ್ಗೆ ಸಾರಿಗೆ ಇಲಾಖೆಯು ಸದ್ಯದಲ್ಲಿಯೇ ಕ್ರಮ ಕೈಗೊಳ್ಳಲಿದೆ ಎಂದರು.
ಭಾರತ್ ಜೋಡೋ ಯುವ ಸಂಘಕ್ಕೆ 10 ಲಕ್ಷ :
“ಯುವಕರಲ್ಲಿ ನಾಯಕತ್ವ ಗುಣ ಬೆಳೆಸುವ ಉದ್ದೇಶದಿಂದ ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ‘ಭಾರತ್ ಜೋಡೋ ಯುವಕ ಸಂಘ’ ರಚನೆ ಮಾಡುವ ಚಿಂತನೆ ಇದೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಸಂಘದಲ್ಲಿ ಕನಿಷ್ಠ 150 ರಿಂದ 200 ಜನರಿರುತ್ತಾರೆ. ರಾಜ್ಯಾದ್ಯಂತ ಒಟ್ಟು 10 ಸಾವಿರ ಯುವಕರ ಸಂಘಗಳನ್ನು ರಚಿಸಲು ಉದ್ದೇಶಿಸಲಾಗಿದ್ದು, ಪ್ರತಿ ಸಂಘಕ್ಕೆ ಸರ್ಕಾರದಿಂದ 10 ಲಕ್ಷ ರೂ ಅನುದಾನ ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಉದ್ಯೋಗದ ಸಮಸ್ಯೆಯನ್ನು ನೀಗಿಸುವ ದಿಸೆಯಲ್ಲಿ ಸರ್ಕಾರ, ಈಗಾಗಲೇ 56,000 ಹುದ್ದೆಗಳನ್ನು ಭರ್ತಿಗೊಳಿಸುವ ನಿರ್ಣಯವನ್ನು ಕೈಗೊಂಡಿದೆ. ಖಾಸಗಿ ರಂಗದಲ್ಲಿ ಉದ್ಯೋಗ ಬಯಸುವ ಯುವಜನರಿಗೆ ಹಾಗೂ ಖಾಸಗಿ ಕಂಪನಿಗಳ ಉದ್ಯೋಗದ ಬೇಡಿಕೆಗಳ ನಡುವೆ ಸಂಪರ್ಕ ಕಲ್ಪಿಸುವ ‘ಯುವ ಉದ್ಯೋಗ ಸೇತು’ ಘೋಷಣೆ ಮಾಡಿದ್ದಾರೆ.

